- ಹೊಸ ವರುಷವ ಬರಮಾಡಿಕೊಳ್ಳುವ ರಾತ್ರಿಗಳಲಿ
ಬಾರುಗಳಲ್ಲಿ ತುಂಬಿ ಕುಣಿವ ಜನ , ಬೆಳಗ್ಗೆ ಗುಡಿಗಳಲ್ಲಿ
ನೂಕಿ ನುಗ್ಗಾಡುತ್ತಿದ್ದರು ಮತ್ತಿನಲಿ !
***
- ನಿನ್ನ ನಾ ಪ್ರೀತಿಸಿ ನನ್ನ ನಾ ಕಳೆದುಕೊಂಡದ್ದು
ನನ್ನ ಬಾಳಿನ ಗೆಲುವು ಹೌದು-ಸೋಲು ಹೌದು
***
- ಗಡಿಯಾರದ ಅಂಗಡಿಯಲ್ಲಿ ನಿಂತು
ಸರಿಯಾದ ಗಂಟೆ ನೋಡುವಷ್ಟೇ ಪ್ರಯಾಸ
ಈ ಜೀವನದಲ್ಲಿ ಒಳ್ಳೆಯ ಸ್ನೇಹಿತನ
ಹುಡುಕುವ ಸಾಹಸ
***
- ನನ್ನ ವೈನ್ ಗ್ಲಾಸಿನಲಿ
ನಿನ್ನ ಕಣ್ಣ ಬಿಂಬ –
ವೈನಿಗೆ ಮತ್ತಷ್ಟು ಮತ್ತು ಸೇರಿತು,
ನೀನು ಗ್ಲಾಸಿಗೆ ತುಟಿಯಿಟ್ಟಾಗ
ಮತ್ತಷ್ಟು ಮತ್ತೆಚ್ಚಿ ನನ್ನ ನಾಲಿಗೆ
ತೊದಲಿತು !
***
- ಊಟಿಯಲ್ಲಿ ಎಲ್ಲರೂ
ಉಣ್ಣೆ ಉಡುಪು ಧರಿಸಿ ಬೆಚ್ಚಗೆ ಓಡಾಡುವುದ
ನೋಡಿದಾಗ –
ನನ್ನವಳ ಬಿಸಿ ಅಪ್ಪುಗೆಯ
ನೆನಪಾಯಿತು
***
- ಮೊಬೈಲ್ ಫೋನಿನ ರೇಡಿಯೊ ವೇವ್ಗಳಿಂದ
ಕಾಣೆಯಾಗಿದ್ದ ಗುಬ್ಬಚ್ಚಿಗಳ ಊಟಿಯಲ್ಲಿ
ಅಲ್ಲಿ ಇಲ್ಲಿ ಒಂದಿಷ್ಟು ನೋಡಿ-ಅವುಗಳ
ಚಿಲಿಪಿಲಿ ಕೇಳಿದಾಗ,
ಮನುಷ್ಯನಿಗೆ ಒಂದಿಷ್ಟು ಕರುಣೆ
ಉಳಿಸಿದ ದೇವರ ಬಗ್ಗೆಯ ನಂಬಿಕೆ
ಸ್ವಲ್ಪ ಬಲವಾಯಿತು
***
- ಬಂಡೀಪುರದಲ್ಲಿ ಫೋಟೋ ತೆಗೆಯುತ್ತಿದ್ದಾಗ
ಹರಿಣಿಯೊಂದು ಮುಖ ತಿರುಗಿಸಿ ಪೋಸ್
ಕೊಟ್ಟಾಗ – ಬಿಂಕದ ತರುಣಿಯರ
ನೆನಪಾಗಿ ನಗು ಬಂತು
***
- ನಾನು ಮಾತ್ರವೇ ಆಗಿದ್ದದ್ದು
ನಾನು ಸಹಾ ಎಂದಾಗಿ
ನಂತರ ನಾನೂ ನೀನೂ ಆಗಿ,
ಈಗ ನಾವಾಗಿ ಮಾತ್ರ ಉಳಿದಿದೆ !